Isaiah 56

ಯೆಹೋವನ ನಿಯಮಗಳನ್ನು ಅನುಸರಿಸುವ ನಪುಂಸಕರೂ, ವಿದೇಶೀಯರೂ ದೇವಾಲಯದಲ್ಲಿ ಹಕ್ಕುದಾರರಾಗುವುದು

1ಯೆಹೋವನು ಹೀಗೆನ್ನುತ್ತಾನೆ, <<ನ್ಯಾಯವನ್ನು ಅನುಸರಿಸಿ, ಧರ್ಮವನ್ನು ಆಚರಿಸಿರಿ;
ಏಕಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವುದು, ನನ್ನ ರಕ್ಷಣಾಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವುದು.
2 ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು,
ಸಬ್ಬತ್ ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.

3

ಯೆಹೋವನನ್ನು ಅವಲಂಭಿಸಿದ ವಿದೇಶೀಯನು, <ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು> ಎಂದು ಮಾತನಾಡದಿರಲಿ;

ಮತ್ತು ನಪುಂಸಕನು, <ಅಯ್ಯೋ, ನಾನು ಗೊಡ್ಡುಮರ> >> ಎಂದು ಅಂದುಕೊಳ್ಳದಿರಲಿ.

4

ಯೆಹೋವನು ಹೀಗೆನ್ನುತ್ತಾನೆ, <<ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದುದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ

5 ಹಿಡಿದುಕೊಂಡಿರುವ ಮಂಗಳಮುಖಿಯಾರಿಗೆ ನನ್ನ ಪ್ರಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು
ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು;
ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.

6

ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ

ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ
ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ
7 ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು;
ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ, ಯಜ್ಞಗಳೂ ನನಗೆ ಮೆಚ್ಚಿಗೆಯಾಗುವವು;
ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.

8

ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನೆಂದರೆ,

<ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು> >> ಎಂಬುದೇ.

ಅಧಿಪತಿಗಳ ಅತ್ಯಾಶೆ, ಜನರ ದೇವದ್ರೋಹ, ಇವುಗಳ ಖಂಡನೆ


9

ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!

10 ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳಿವಳಿಕೆಯಿಲ್ಲ;
ಇವರೆಲ್ಲರೂ ಬೊಗಳಲಾರದ ಮೂಕ ನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು.

11

ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು.

ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ,
ಇವರಲ್ಲಿ ಯಾರೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ.
12 <<ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ;
ನಾಳೆಯೂ ಈ ದಿನದಂತೆ ಕೇವಲ ಅತ್ಯಂತ ವಿಶೇಷ ದಿನವಾಗಿರುವುದು>> ಎಂದು ಹರಟೆ ಕೊಚ್ಚಿಕೊಳ್ಳುವರು.

Copyright information for KanULB